ರಾಷ್ಟ್ರಕವಿ ಕುವೆಂಪು ಪುತ್ತಳಿಗೆ ದೀಪಾಲಂಕಾರ ವಿಳಂಬ: ಮಡಿಕೇರಿ ನಗರಸಭೆ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ

ಮಡಿಕೇರಿ: ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ನಗರದ ಪ್ರಮುಖ ವ್ಯಕ್ತಿಗಳ ಪುತ್ತಳಿಗಳಿಗೆ ದೀಪಾಲಂಕಾರ ಮಾಡುವ ನಗರಸಭೆಯು, ರಾಷ್ಟ್ರಕವಿ ಕುವೆಂಪು ಅವರ ಪುತ್ತಳಿಯನ್ನು ಕಡೆಗಣಿಸುವ ಮೂಲಕ ಕವಿಗಳಿಗೆ ಹಾಗೂ ನಾಡಿಗೆ ಅಪಚಾರ ಮಾಡುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಮೀಪಿಸುತ್ತಿದ್ದಂತೆ ನಗರದ ಆಯ್ದ ಕೆಲವು ವೃತ್ತಗಳು ಮತ್ತು ಮಹನೀಯರ ಪುತ್ತಳಿಗಳಿಗೆ ಎರಡು-ಮೂರು ದಿನಗಳ ಮುಂಚಿತವಾಗಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಕನ್ನಡದ ವರಕವಿ, ರಾಷ್ಟ್ರಕವಿ ಕುವೆಂಪು ಅವರ ಪುತ್ತಳಿಗೆ ಮಾತ್ರ ಪ್ರತಿವರ್ಷವೂ ಈ ವ್ಯವಸ್ಥೆ ವಿಳಂಬವಾಗುತ್ತಿದೆ.
ಈ ಕುರಿತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಪ್ರತಿವರ್ಷವೂ ಹಬ್ಬ ಮುಗಿಯುವ ಹಂತದಲ್ಲಿ ಅಥವಾ ತಡವಾಗಿ, ಯಾವುದೇ ವ್ಯವಸ್ಥಿತ ಕ್ರಮವಿಲ್ಲದೆ ದೀಪಾಲಂಕಾರ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅಂಥ ಮಹಾನ್ ಚೇತನಕ್ಕೆ ಮಡಿಕೇರಿ ನಗರಸಭೆ ತೋರುತ್ತಿರುವ ಈ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಕೂಡಲೇ ನಗರಸಭೆ ಎಚ್ಚೆತ್ತುಕೊಂಡು ಇನ್ನುಮುಂದೆ ಎಲ್ಲಾ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲೂ ಕುವೆಂಪು ಪುತ್ತಳಿಗೆ ಕಾಲಕಾಲಕ್ಕೆ ಸರಿಯಾಗಿ ಹಾಗೂ ವ್ಯವಸ್ಥಿತವಾಗಿ ದೀಪಾಲಂಕಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ಥಳೀಯರು ಮತ್ತು ಕೊಡಗು ಹಿತರಕ್ಷಣ ವೇದಿಕೆ ಕೊಡಗು ಅಧ್ಯಕ್ಷರಾದ ರವಿ ಗೌಡರವರು ಆಗ್ರಹಿಸಿದ್ದಾರೆ.
ಜಾನ್ಸನ್ ಕೊಡಗು
ಜಿಲ್ಲಾ ವರದಿಗಾರರು
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo



