ಬೆಂಗಳೂರಿನ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಡ್ರಗ್ಸ್ ದಂಧೆ: 10ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ, ಕೇರಳ ಮೂಲದ ಜೋಡಿ ಪೊಲೀಸ್ ವಶಕ್ಕೆ

ಬೆಂಗಳೂರು: ಎಲ್ಲರೂ ಬೆರಗಾಗುವಂತೆ ಐಷಾರಾಮಿ ಜೀವನ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಯುವಕ-ಯುವತಿ ಜೋಡಿಯ ಅಸಲಿ ಮುಖವನ್ನು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಯಲು ಮಾಡಿದ್ದಾರೆ. ಇವರು ವಾಸ್ತವ್ಯವಿದ್ದ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 10 ಕೋಟಿ ರೂ. ಮೌಲ್ಯದ ಬೃಹತ್ ಪ್ರಮಾಣದಲ್ಲಿ ಮಾದಕದ್ರವ್ಯ ವಶಪಡಿಸಿದ್ದು, ಅಂತರಾಷ್ಟ್ರೀಯ ಡ್ರಗ್ ಜಾಲದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬಾಗಲೂರಿನಲ್ಲಿರುವ ಪ್ರತಿಷ್ಠಿತ ಪ್ರೆಸ್ಟೀಜ್ ಫೈನ್ ಬೇರಿ ಪಾರ್ಕ್ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಈ ಅಕ್ರಮ ಚಟುವಟಿಕೆ ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬವರನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲಿಂಗ್ ಅನ್ನೇ ವೃತ್ತಿಯನ್ನಾಗಿಸಿದ್ದ ಆರೋಪಿಗಳು ಯಾವುದೇ ಅನುಮಾನ ಮೂಡದಂತೆ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ತನಿಖೆ ವೇಳೆ ಡ್ರಗ್ ಜಾಲವು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಥೈಲ್ಯಾಂಡ್ ಮೂಲದ ವಿನ್ಸೆಂಟ್ ಎಂಬಾತ ಈ ಜಾಲದ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತ ವಿಮಾನಗಳ ಮೂಲಕ ಹಂತ ಹಂತವಾಗಿ ಡ್ರಗ್ಸ್ ಅನ್ನು ಬೆಂಗಳೂರಿಗೆ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ವಿನ್ಸೆಂಟ್ ನೀಡುತ್ತಿದ್ದ ಸೂಚನೆಗಳ ಅನ್ವಯ ಮಾದಕದ್ರವ್ಯಗಳನ್ನು ಸ್ವೀಕರಿಸುವ ಈ ಜೋಡಿ ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದರು.
ಕಾರ್ಯಾಚರಣೆ ಮೂಲಕ ಪೊಲೀಸರು ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ 8,335 LSD ಸ್ಟ್ರಿಪ್ಸ್ ವಶಪಡಿಸಿಕೊಂಡಿದ್ದಾರೆ. ಒಂದು ಎಲ್ಎಸ್ಡಿ ಸ್ಟ್ರಿಪ್ ಬೆಲೆ ಸುಮಾರು 6,000 ರೂ. ಆಗಿದ್ದು, ಇವುಗಳನ್ನು ದೇವತೆಗಳ ಚಿತ್ರಗಳು ಹಾಗೂ ಕಲಾಕೃತಿಗಳ ರೂಪದಲ್ಲಿ ಮುದ್ರಿಸಿ ಯಾರಿಗೂ ಅನುಮಾನ ಬಾರದಂತೆ ಮಾರಾಟ ಮಾಡಲಾಗುತ್ತಿತ್ತು. ಇದರ ಜೊತೆಗೆ 534 ಗ್ರಾಂ ಚರಸ್ ಮತ್ತು 5 ಕೆಜಿ ಹೈಡೋ ಗಾಂಜಾವನ್ನೂ ಜಪ್ತಿ ಮಾಡಲಾಗಿದೆ.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo