ರಾಜ್ಯ

೨೭ ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಫೆ. 21, 22 ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 27 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ಶಿಶಿಲ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. 21ನೇ ತಾರೀಕಿನಂದು ಬೆಳಗ್ಗೆ 8.45 ಕ್ಕೆ ಅಸೈಗೋಳಿಯ ಕೇಂದ್ರ ಮೈದಾನದಿಂದ ಕನ್ನಡ ಸಾಂಸ್ಕೃತಿಕ ದಿಬ್ಬಣ ಆಗಮಿಸಲಿದೆ. ಪದ್ಮಶ್ರೀ ಹರೇಕಳ ಹಾಜಬ್ಬ ಇವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. 10 ಗಂಟೆಗೆ ಸರಿಯಾಗಿ ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾಗಿರುವ ಡಾ. ಪ್ರಭಾಕರ ಶಿಶಿಲ ಉಪಸ್ಥಿತರಿರುತ್ತಾರೆ. ಹಿರಿಯ ಕವಿಗಳಾಗಿರುವ ಸನ್ಮಾನ್ಯ ಬಿ ಆರ್ ಲಕ್ಷ್ಮಣ ರಾವ್ ಬೆಂಗಳೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧ್ಯಕ್ಷರೂ ಉಳ್ಳಾಲ ತಾಲೂಕಿನ ಶಾಸಕರೂ ಆಗಿರುವ ಸನ್ಮಾನ್ಯ ಯು ಟಿ ಖಾದರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಸ್ತುಪ್ರದರ್ಶನದ ಉದ್ಘಾಟನೆಯನ್ನು, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಪುಸ್ತಕ ಮತ್ತು ಇತರ ಮಳಿಗೆಗಳ ಉದ್ಘಾಟನೆಯನ್ಬು ನೆರವೇರಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿರುವ ಭುವನೇಶ್ವರಿ ಹೆಗಡೆ ಉಪಸ್ಥಿತರಿರುತ್ತಾರೆ. ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ. ಎಂ.ಪಿ. ಶ್ರೀನಾಥ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸದಾಶಿವ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಸಾಪದ ಮಾಜಿ ರಾಜ್ಯಾಧ್ಯಕ್ಷರಾಗಿರುವ ಧರ್ಮದರ್ಶಿ ಹರಿಕೃಷ್ಣ ಪುನರೂರು, ರೋಹನ್ ಕಾರ್ಪೊರೇಷನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ರೋಹನ್ ಮೊಂತೆರೋ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್ ಕೆ (ಭಾ. ಆ. ಸೇ.), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ದ.ಕ.ಜಿಲ್ಲಾ ಕಸಾಪ ಇದರ ನಿಕಟಪೂರ್ವ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಕಸಾಪ ಕೇರಳ ಗಡಿನಾಡ ಘಟಕ ಇದರ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಇವರು ಉಪಸ್ಥಿತರಿರುತ್ತಾರೆ.ನಂತರ ನಡೆಯುವ ನೂತನ ಕೃತಿಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಒಟ್ಟು 18 ಕೃತಿಗಳು ಬಿಡುಗಡೆಗೊಳ್ಳಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ರಾಜು ಮೊಗವೀರ ಕೆ ಎ ಎಸ್ ಇವರು ಇದನ್ನು ನಡೆಸಿಕೊಡಲಿದ್ದಾರೆ. ನಂತರ ಕುದ್ಮಲ್ ರಂಗರಾಯರ ಬಗೆಗಿನ ವಿಶೇಷೋಪನ್ಯಾಸದಲ್ಲಿ ಶ್ರೀದೇವಿ ಕೆ ಪುತ್ತೂರು, ಕರಾವಳಿಯ ಲೋಕದೃಷ್ಟಿ ಎಂಬ ವಿಷಯದ ಬಗೆಗಿನ ಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ, ಡಾ. ಕುಮಾರಸ್ವಾಮಿ ಹೆಚ್, ಜಬ್ಬಾರ್ ಸಮೊ ಸಂಪಾಜೆ ಭಾಗವಹಿಸಲಿದ್ದಾರೆ. ನಂತರ ನಡೆಯಲಿರುವ ಅಗಲಿದ ಗಣ್ಯರಿಗೆ ನುಡಿನಮನ ಹಾಗೂ ನೆನಪು ಕಾರ್ಯಕ್ರಮದಲ್ಲಿ ಯಕ್ಷಗಾನದ ಮೊದಲ ಮಹಿಳಾ ಭಾಗವತರಾಗಿದ್ದ ಲೀಲಾವತಿ ಬೈಪಾಡಿತ್ತಾಯ ಇವರ ಬಗೆಗೆ ಕದ್ರಿ ನವನೀತ ಶೆಟ್ಟಿ ನುಡಿನಮನವನ್ನು, ಶಾಲಿನಿ ಹೆಬ್ಬಾರ್ ಮತ್ತು ಹೇಮ ಸ್ವಾತಿ ಕುರಿಯಾಜೆ ಇವರು ಗಾನ ನಮನವನ್ನು ಸಲ್ಲಿಸಲಿದ್ದಾರೆ. ನಂತರ ನಡೆಯುವ ಭಾಷಾ ಬಾಂಧವ್ಯ ದ ಸಂವಾದ ಗೋಷ್ಠಿಯಲ್ಲಿ ಡಾ. ಮಾಧವ ಎಂ ಕೆ, ಮಹಮ್ಮದ್ ಅಲಿ ಕಮ್ಮರಡಿ, ಮಿಲನ ಭರತ್ ಭಗಾಮಂಡಲ, ಕಲ್ಲಚ್ಚು ಮಹೇಶ್ ಇವರು ಮಾತನಾಡಲಿದ್ದಾರೆ. ಸಮ್ಮೇಳನದ ಎರಡನೇ ದಿನವಾದ ಶನಿವಾರ ಪ್ರಥಮ ಗೋಷ್ಠಿಯಾಗಿ ಹಿರಿಯರ ಕುರಿತು ಯುವ ಚಿಂತನೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಚೇತನ್ ಮುಂಡಾಜೆ, ಮಹಮ್ಮದ್ ಮಿಕ್ ದಾದ, ಫಾತಿಮತ್ ರಫೀದಾ ಇವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ. ನಂತರ ಸಾಹಿತಿ ಸಾಹಿತ್ಯ ರಸ ಪ್ರಸಂಗಗಳು ಎಂಬ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು ಡಾ ಜಯಪ್ರಕಾಶ್ ಮಾವಿನಕುಳಿ, ಬಿ ಎಂ ಹನೀಫ್ ಬೆಂಗಳೂರು, ನರೇಂದ್ರ ರೈ ದೇರ್ಲ ಇವರು ಭಾಗವಹಿಸಲಿದ್ದಾರೆ. ರಾಣಿ ಅಬ್ಬಕ್ಕನ ಕುರಿತಾದ ವಿಶೋಪನ್ಯಾಸವನ್ನು ಹಮ್ಮಿಕೊಂಡಿದ್ದು ಡಾ. ತುಕಾರಾಂ ಪೂಜಾರಿ ಉಪನ್ಯಾಸವನ್ನು ನೀಡಲಿದ್ದಾರೆ. ಕವಿತೆಗಳ ಕಥೆ: ಕವಿ ಕಾವ್ಯ ಸಂವಾದದಲ್ಲಿ ಕವಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಸ್ಮಿತಾ ಅಮೃತರಾಜ್, ಚೇತನ್ ಸೋಮೇಶ್ವರ ಮತ್ತು ವಿಲ್ಸನ್ ಕಟೀಲು ಭಾಗವಹಿಸಲಿದ್ದಾರೆ. ಪ್ರಗತಿಶೀಲ ಧ್ವನಿ ನಿರಂಜನ-ನೂರರ ನೆನಪು ವಿಶೇಷೋಪನ್ಯಾಸದಲ್ಲಿ ಡಾ. ಸುಂದರ ಕೇನಾಜೆ ಮಾತನಾಡಲಿದ್ದಾರೆ. ನಂತರದಲ್ಲಿ ಉಷಾಲತಾ ಸರಪಾಡಿ ಅವರು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವನ್ನು ನಡೆಸಿಕೊಡಲಿದ್ದಾರೆ. ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಎಂಬ ವಿಷಯದ ಕುರಿತಾಗಿ ಡಾ. ಯೋಗೀಶ್ ಕೈರೋಡಿ ಮತ್ತು ಕನ್ನಡ ವೈದ್ಯ ಸಾಹಿತ್ಯ ಎಂಬ ವಿಷಯದ ಕುರಿತಾಗಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಪನ್ಯಾಸ ನೀಡಲಿದ್ದಾರೆ. ನಂತರ ನಡೆಯಲಿರುವ ಬಹಿರಂಗ ಅಧಿವೇಶನದಲ್ಲಿ ಐತ್ತಪ್ಪ ನಾಯ್ಕ್ ನಿರ್ಣಯ ಮಂಡನೆಯನ್ನು ಮಾಡಲಿದ್ದು ಡಾ ಎಂ ಪಿ ಶ್ರೀನಾಥ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸನ್ಮಾನ ಸಮಾರಂಭ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಲೇಖಕ ಜೋಗಿ (ಗಿರೀಶ್ ರಾವ್ ಉಪ್ಪಿನಂಗಡಿ) ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ೧೪ ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸನ್ಮಾನ್ಯ ಯು ಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿರುವ ಶುವರಾಜ್ ಸಂಗಪ್ಪ ತಂಗಡಗಿ, ಮಂ.ವಿ.ವಿ. ಕುಲಪತಿ ಪ್ರೊ.ಪಿ.ಎಲ್. ಧರ್ಮ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಉಡುಪಿ ಜಿಲ್ಲಾ ಕಸಾಪದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಂ.ವಿ.ವಿ. ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಉಪಸ್ಥಿತರಿರುತ್ತಾರೆ. ಎರಡು ದಿನದ ಸಮ್ಮೇಳನದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ, ಸನಾತನ ನಾಟ್ಯಾಲಯ ಮಂಗಳೂರು, ಭಾರತೀ ಗೋಪಾಲ್ ಶಿವಪುರ, ರೇಷ್ಮಾ ನಿರ್ಮಲ ಭಟ್ ಬಳಗ, ಕೊಳಲು ಸಂಗೀತ ವಿದ್ಯಾಲಯ ಇರಾ, ಭಾರತೀ ನೃತ್ಯಾಲಯ ಮುಡಿಪು,ನಿನಾದ ಸಾಂಸ್ಕೃತಿಕ ಕೇಂದ್ರ ಬೆಳ್ಳಾರೆ, ಸುಚಿತ್ರಾ ಹೊಳ್ಳ ಗಾಯನ, ಶ್ರುತಕೀರ್ತಿ ರಾಜ ಬಳಗದಿಂದ ಯಕ್ಷಗಾನ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ದ. ಕ ಜಿಲ್ಲಾ ಕಸಾಪ ಅಧ್ಯಕ್ಷ‌ ಡಾ. ಎಂ ಪಿ ಶ್ರೀನಾಥ್ ವಿವರಗಳನ್ನು ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕೋಶಾಧಿಕಾರಿ ಲ ಚಂದ್ರಹಾಸ ಶೆಟ್ಟಿ, ಮಾಧ್ಯಮ ಸಮಿತಿ ಅಧ್ಯಕ್ಷ‌ ವಸಂತ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button