ವೀಲಿಂಗ್ ಮಾಡುವಾಗ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು
ಬೆಂಗಳೂರು : ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ಕೊಮ್ಮಘಟ್ಟ ವೃತ್ತದಲ್ಲಿ ಅಪಘಾತ ಸಂಭವಿಸಿದ್ದು, ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರ ಸದ್ದಾಂ ಪಾಷಾ ಮೃತಪಟ್ಟಿದ್ದಾರೆ.
‘ಜಗಜೀವನ್ರಾಮ್ ನಗರದ ಸದ್ದಾಂ ಪಾಷಾ, ತಮ್ಮಿಬ್ಬರು ಸ್ನೇಹಿತರ ಜೊತೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮೂವರು ಸ್ನೇಹಿತರು, ಒಂದೇ ದ್ವಿಚಕ್ರ ವಾಹನದಲ್ಲಿ ಅತೀ ವೇಗದಲ್ಲಿ ವ್ಹೀಲಿ ಮಾಡುತ್ತಿದ್ದರು ಎಂಬುದಾಗಿ ಸ್ಥಳೀಯರು ಹೇಳಿಕೆ ನೀಡಿದ್ದಾರೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
‘ಕೊಮ್ಮಘಟ್ಟ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ಗುಂಡಿ ತೋಡಲಾಗಿತ್ತು. ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್ ನಿಲ್ಲಿಸಲಾಗಿತ್ತು. ಒಂದೇ ದ್ವಿಚಕ್ರ ವಾಹನದಲ್ಲಿ ಸದ್ದಾಂ ಪಾಷಾ, ಸ್ನೇಹಿತರಾದ ಉಮ್ರಾನ್, ಮುಬಾರಕ್ ಹೊರಟಿದ್ದರು. ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದರು. ರಸ್ತೆಯಲ್ಲಿ ಹೊರಟಿದ್ದ ಜನರ ವಾಹನಗಳನ್ನು ಹಿಂದಿಕ್ಕಿ ವ್ಹೀಲಿ ಮಾಡುತ್ತ ಮುಂದೆ ಸಾಗಿದ್ದರು. ಅವರು ಬ್ಯಾರಿಕೇಡ್ ಗಮನಿಸಿರಲಿಲ್ಲ. ಅತೀ ವೇಗದಲ್ಲಿದ್ದ ದ್ವಿಚಕ್ರ ವಾಹನ, ಬ್ಯಾರಿಕೇಡ್ಗೆ ಗುದ್ದಿತ್ತು. ನಂತರ, ದ್ವಿಚಕ್ರ ವಾಹನ ಉರುಳಿ ಪಕ್ಕದ ಗುಂಡಿಗೆ ಬಿದ್ದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ವಾಹನ ಸಮೇತ ಗುಂಡಿಯಲ್ಲಿ ಬಿದ್ದಿದ್ದ ಮೂವರನ್ನು ಸ್ಥಳಿಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ತೀವ್ರ ಗಾಯಗೊಂಡು ಸದ್ದಾಂ ಮೃತಪಟ್ಟಿದ್ದಾರೆ. ಸ್ನೇಹಿತರಿಬ್ಬರಿಗೆ ಗಾಯವಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.