ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಕಂಪ್ಲೀಟ್ ಡೀಟೇಲ್ಸ್ ಬೇಕಾ? ನೋಡಿ!
ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಓಪನಿಂಗ್ ಮುಕ್ತಾಯವಾಗಿದೆ. ರಂಗು ರಂಗಿನ ಶೋ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಸ್ವರ್ಗ ಹಾಗೂ ನರಕ ಎಂದು ಮನೆಯನ್ನು ಎರಡು ಭಾಗ ಮಾಡಿ ಸ್ಪರ್ಧಿಗಳನ್ನು ವಿಭಾಗಿಸಿ ಮನೆಯೊಳಗೆ ಕಳುಹಿಸಲಾಗಿದೆ.
ಒಂದು ದಿನ ಮುನ್ನ ‘ರಾಜಾ-ರಾಣಿ’ ಗ್ರ್ಯಾಂಡ್ ಫಿನಾಲೆ ಸಮಯದಲ್ಲೇ ಬಿಗ್‌ಬಾಸ್ ಮನೆಗೆ ಹೋಗುವ 4 ಜನ ಸ್ಪರ್ಧಿಗಳ ಹೆಸರು ಹೊರಬಿದ್ದಿತ್ತು. ಲಾಯರ್ ಜಗದೀಶ್, ನಟಿ ಗೌತಮಿ ಜಾಧವ್, ಗೋಲ್ಡ್ ಸುರೇಶ್ ಹಾಗೂ ಚೈತ್ರಾ ಕುಂದಾಪುರ ಮನೆಗೆ ಹೋಗುವುದು ಖಚಿತವಾಗಿತ್ತು. ಗ್ರ್ಯಾಂಡ್ ಓಪನಿಂಗ್ ವೇದಿಕೆಗೆ ಭವ್ಯಾ ಗೌಡ ಮೊದಲ ಸ್ಪರ್ಧಿಯಾಗಿ ಬಂದರು. ಅವರೊಟ್ಟಿಗೆ ಯಮುನಾ ಶ್ರೀನಿಧಿ ಕೂಡ ಮನೆಯೊಳಗೆ ಹೋದರು.
ಈ ಬಾರಿ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಹೋಗಬಹುದು ಎನ್ನುವ ಬಗ್ಗೆ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಒಂದಷ್ಟು ಜನ ದೊಡ್ಮನೆಗೆ ಹೋಗುವ ಬಗ್ಗೆ ವೀಕ್ಷಕರು ಗೆಸ್ ಮಾಡಿದ್ದರು. ಇನ್ನುಳಿದಂತೆ ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ಹುಡುಕಿ ತಂದಿದೆ.
- ಭವ್ಯಾ ಗೌಡ
‘ಗೀತಾ’ ಧಾರಾವಾಹಿಯಲ್ಲಿ ನಟಿಸಿ ಗೆದ್ದ ಭವ್ಯಾ ಗೌಡ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ. ಗಗನ ಸಖಿ ಆಗಬೇಕು ಎಂದುಕೊಂಡಿದ್ದ ಆಕೆ ಕೊನೆಗೆ ನಟಿಯಾಗಿದ್ದರು. ‘ಗೀತಾ’ ಟೈಟಲ್ ರೋಲ್ ಒಳ್ಳೆ ಹೆಸರು ತಂದುಕೊಟ್ಟಿತ್ತು. ಮಾಡೆಲಿಂಗ್ ಮೂಲಕ ಬಣ್ಣ ಹಚ್ಚಲು ಆರಂಭಿಸಿದ ಭವ್ಯಾ ಇದೀಗ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ಕೆಲವೊಂದು ವಿಡಿಯೋ ಗಳನ್ನು ತಾನೇ ವೈರಲ್ ಮಾಡಿಸಿ ಜನಪ್ರಿಯತೆ ಗಳಿಸಿದ್ದರು ಹಾಗೂ ತುಂಬಾ ಫೇಕ್ ಪಬ್ಲಿಸಿಟಿ ಕೊಡಿಸಿಕೊಂಡು ಬಂದಿದ್ದಾರೆ ಅನ್ನೋದು ಒಂದು ವರ್ಗದ ವಾದ.
- ಯಮುನಾ ಶ್ರೀನಿಧಿ
ಹಿರಿಯ ನಟಿ ಯಮುನಾ ಶ್ರೀನಿಧಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಕಲಾವಿದೆ ಕೂಡ ಆಗಿರುವ ಯಮುನಾ ಅವರು ನಟ ದರ್ಶನ್ ಅಭಿಮಾನಿ ಎಂದು ಹಿಂದೆ ಹೇಳಿಕೊಂಡಿದ್ದರು. ‘ತಾರಕ್’ ಚಿತ್ರದಲ್ಲಿ ಕೂಡ ನಟಿಸಿದ್ದರು. ಇನ್ನುಳಿದಂತೆ ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’ ಸೇರಿ ಕೆಲ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
- ಧನರಾಜ್ ಆಚಾರ್
ಸಿನಿಮಾ ನಟ-ನಟಿಯರು ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿಗಳು ಬಿಗ್‌ಬಾಸ್ ಮನೆಗೆ ಬರುವುದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನರಾಜ್ ಆಚಾರ್ ಕೂಡ ಈ ಬಾರಿ ಅಂತಹ ಅವಕಾಶ ಪಡೆದುಕೊಂಡಿದ್ದಾರೆ. ಒಂದು ತುಳು ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಪತ್ನಿ ಜೊತೆ ಸೇರಿ ರೀಲ್ಸ್ ಮಾಡಿ ಹೆಚ್ಚು ಗಮನ ಸೆಳೆದ ಧನರಾಜ್ ಇದೀಗ ಕಿರುತೆರೆ ವೀಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ.
- ಗೌತಮಿ ಜಾಧವ್
‘ಸತ್ಯ’ ಧಾರಾವಾಹಿಯಲ್ಲಿ ನಟಿಸಿ ಭಾರೀ ಜನಪ್ರಿಯತೆ ಗಳಿಸಿದವರು ಗೌತಮಿ ಜಾಧವ್. ನಿನ್ನೆಯೇ (ಸೆಪ್ಟೆಂಬರ್ 28) ಗೌತಮಿ ದೊಡ್ಮನೆ ಒಳಗೆ ಹೋಗುವುದು ಪಕ್ಕಾ ಆಗಿತ್ತು. ಭರ್ಜರಿ ಡ್ಯಾನ್ಸ್ ಪರ್ಫಾರ್ಮನ್ಸ್ ಮೂಲಕ ಆಕೆ ವೇದಿಕೆಗೆ ಬಂದರು. ಇನ್ನು ಆಕೆ ಬಿಗ್‌ಬಾಸ್ ಮನೆಯ ಸ್ವರ್ಗಕ್ಕೆ ಹೋಗಬೇಕು ಎಂದು ಸಾಕಷ್ಟು ಜನ ಅಭಿಮಾನಿಗಳು ವೋಟ್ ಮಾಡಿರುವುದು ರಿವೀಲ್ ಆಗಿದೆ.
- ಅನುಷಾ ರೈ
ನಟಿ ಅನುಷಾ ರೈ 5ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ‘ದಮಯಂತಿ’, ‘ಖಡಕ್’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ. ಕಿರುತೆರೆಯ ‘ನಾಗಕನ್ನಿಕೆ’ ಹಾಗೂ ‘ರಾಜಕುಮಾರಿ’ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆಕೆ ಹಾಟ್ ಹಾಟ್ ಫೋಟೊ ಶೇರ್ ಮಾಡಿ ಸದ್ದು ಮಾಡುತ್ತಿದ್ದರು.
- ಧರ್ಮ ಕೀರ್ತಿರಾಜ್
ನಟಿ ಅನುಷಾ ಜೊತೆಗೆ ನಟ ಧರ್ಮ ಕೀರ್ತಿರಾಜ್ ಕೂಡ ದೊಡ್ಮನೆ ಒಳಗೆ ಹೋದರು. ಖ್ಯಾತ ಖಳನಟ ಕೀರ್ತಿರಾಜ್ ಪುತ್ರ ಧರ್ಮ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನವಗ್ರಹ’ ಚಿತ್ರದ ವಿಕ್ಕಿ ಪಾತ್ರದಲ್ಲಿ ಇವತ್ತಿಗೂ ಸಿನಿರಸಿಕರು ಇವರನ್ನು ನೆನಪಿಟ್ಟುಕೊಂಡಿದ್ದಾರೆ. ಬಳಿಕ ಇವರಿಗೆ ಯಶಸ್ಸು ಸಿಗಲಿಲ್ಲ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
- ಲಾಯರ್ ಜಗದೀಶ್
ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್ ಹೋಗುವುದು ಒಂದು ದಿನ ಮೊದಲೇ ಗೊತ್ತಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕಾನೂನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಿದ್ದರು. ಭ್ರಷ್ಟಚಾರದ ವಿರುದ್ಧ ಆಗಾಗ್ಗೆ ಮಾತನಾಡುತ್ತಿದ್ದರು. ಮಾಧ್ಯಮಗಳಲ್ಲಿ ಕೆಲವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಲಾಯರ್ ಜಗದೀಶ್ ಹೆಚ್ಚು ಸದ್ದು ಮಾಡಿದ್ದರು. ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಶಿಶಿರ್
‘ಕುಲವಧು’ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾದ ಶಿಶಿರ್ 8ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ತೆಲುಗು ಧಾರಾವಾಹಿಯಲ್ಲೂ ಕೂಡ ಅವರು ಬಣ್ಣ ಹಚ್ಚಿದ್ದಾರೆ. ಬಿಂದಾಸ್ ಡ್ಯಾನ್ಸ್ ಮಾಡಿ ವೇದಿಕೆಗೆ ಬಂದ ಶಿಶಿರ್ ಬಿಗ್‌ಬಾಸ್ ಮನೆಗೆ ಹೋಗುವುದು ನನ್ನ ದೊಡ್ಡ ಕನಸು ಎಂದು ಹೇಳಿದ್ದಾರೆ.
- ತ್ರಿವಿಕ್ರಮ್
ಶಿಶಿರ್ ಜೊತೆಗೆ ‘ಪದ್ಮಾವತಿ’ ಧಾರಾವಾಹಿ ನಟ ತ್ರಿವಿಕ್ರಮ್ ದೊಡ್ಮನೆ ಪ್ರವೇಶಿಸಿದರು. ಇಬ್ಬರಲ್ಲಿ ಯಾರಿಗೆ ಎಷ್ಟು ಶಕ್ತಿ ಇದೆ ನೋಡೋಣ ಎಂದು ವೇದಿಕೆಯಲ್ಲಿ ಕಿಚ್ಚ ಇಬ್ಬರಿಗೂ ಫುಶ್‌ಅಪ್ಸ್ ಮಾಡುವ ಟಾಸ್ಕ್ ಕೊಟ್ಟರು. ಬಳಿಕ ಇಬ್ಬರು ಬಿಂದಾಸ್ ಹೆಜ್ಜೆ ಹಾಕಿ ಸಂಭ್ರಮಿಸಿದರು.
- ಹಂಸಾ ಪ್ರತಾಪ್
ಹಲವು ವರ್ಷಗಳಿಂದ ನಟಿ ಹಂಸಾ ಪ್ರತಾಪ್ ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ‘ಡ್ರಾಮಾ’, ‘ಅಂಗುಲಿಮಾಲ’ ಹಾಗೂ ‘ಅಮ್ಮ’ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ರಾಜೇಶ್ವರಿ ಪಾತ್ರದಲ್ಲಿ ಈಕೆ ಮಿಂಚುತ್ತಿದ್ದಾರೆ.
- ಮಾನಸ
ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು ಪತ್ನಿ ಮಾನಸ ಕೂಡ ದೊಡ್ಮನೆಗೆ ಒಳಗೆ ಹೋಗುವ ಅವಕಾಶ ಪಡೆದಿದ್ದಾರೆ. ಕಳೆದ ವರ್ಷ ಸಂತು ಬಿಗ್‌ಬಾಸ್ ಮನೆಯಲ್ಲಿ ವೀಕ್ಷಕರನ್ನು ರಂಜಿಸಿದ್ದರು. ಈ ಬಾರಿ ಪತ್ನಿಯ ಸರದಿ. ಕೆಲ ಕಿರುತೆರೆ ಶೋಗಳಲ್ಲಿ ಮಾನಸ ಭಾಗವಹಿಸಿ ವೀಕ್ಷಕರನ್ನು ರಂಜಿಸಿದ್ದಾರೆ.
- ಗೋಲ್ಡ್ ಸುರೇಶ್
ಉದ್ಯಮಿ ಗೋಲ್ಡ್ ಸುರೇಶ್ ಈ ಬಾರಿ ಬಿಗ್‌ಬಾಸ್ ಮನೆಗೆ ಅಚ್ಚರಿಯ ಪ್ರವೇಶ ಎಂದು ಕೆಲವರು ಹೇಳುತ್ತಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಸುರೇಶ್ ಮುಂದೆ ತಮ್ಮದೇ ಪರಿಶ್ರಮದಿಂದ ಶ್ರೀಮಂತರಾಗಿದ್ದಾರೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಧರಿಸಿ ಓಡಾಡುತ್ತಾರೆ. ತಮ್ಮೊಟ್ಟಿಗೆ ಗನ್‌ಮನ್, ಬಾಡಿಗಾರ್ಡ್‌ಗಳನ್ನಿಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೂ ಬಂದಿದ್ದರು. ಉತ್ತರ ಕರ್ನಾಟಕ ಮೂಲದ ಸುರೇಶ್ ಈ ಬಾರಿ ಬಿಗ್‌ಬಾಸ್ ಮನೆಯ ಕೇಂದ್ರಬಿಂದುವಾಗಿದ್ದಾರೆ.
- ಐಶ್ವರ್ಯ ಸಿಂಧೋಗಿ
‘ಸಪ್ನೋಂಕಿ ರಾಣಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಐಶ್ವರ್ಯ ಸಿಂಧೋಗಿ ಬಿಗ್‌ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಹೋಗಿದ್ದಾರೆ. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ನೋವಿನ ಸಂಗತಿಯನ್ನು ಅವರು ವೇದಿಕೆಯಲ್ಲಿ ಬಿಚ್ಚಿಟ್ಟರು. ಸಹೋದರ, ಸಹೋದರಿ ಇಲ್ಲದೇ ಒಬ್ಬೊಟಿಯಾಗಿ ಪೋಷಕರ ಜೊತೆ ಬೆಳೆದ ಐಶ್ವರ್ಯ ದೊಡ್ಮನೆಯಲ್ಲಿ ಅಷ್ಟು ಜನರ ಜೊತೆ ಹೇಗೆ ಇರ್ತಿನೋ ಗೊತ್ತಿಲ್ಲ ಎಂದಿದ್ದಾರೆ.
- ಚೈತ್ರಾ ಕುಂದಾಪುರ
ಬಿಗ್‌ಬಾಸ್ ಮನೆಗೆ ಬರೀ ಸೆಲೆಬ್ರೆಟಿಗಳು ಮಾತ್ರವಲ್ಲ ವಿವಾದಗಳನ್ನು ಸೃಷ್ಟಿಸಿಕೊಂಡವರು ಹೋಗುತ್ತಾರೆ. ಈ ಹಿಂದೆ ಕೂಡ ಕೆಲ ವಿವಾದಾಸ್ಪದ ವ್ಯಕ್ತಿಗಳು ದೊಡ್ಮನೆ ಒಳಗೆ ಹೋಗಿದ್ದರು. ಈ ಬಾರಿ ಚೈತ್ರಾ ಕುಂದಾಪುರ ಅದೇ ರೀತಿಯಲ್ಲಿ ಹುಬ್ಬೇರಿಸಿದ್ದಾರೆ. ಕೆಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿ ಬಳಿಕ ತಮ್ಮ ಆವೇಷಭರಿತ ಭಾಷಣಗಳಿಂದ ಆಕೆ ಸದ್ದು ಮಾಡಿದ್ದರು. ಆದರೆ ದಿಢೀರನೆ ವಂಚನೆ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು. ಜಾಮೀನು ಪಡೆದು ಹೊರ ಬಂದ ಚೈತ್ರಾ ಈಗ ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ.
- ಮೋಕ್ಷಿತಾ ಪೈ
ಮೋಕ್ಷಿತಾ ಪೈ ಅವರು ‘ಪಾರು’ ಎಂದೇ ಫೇಮಸ್ ಆದವರು. ಅವರು ಜೀ ಕನ್ನಡದ ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರಿಗೆ ನರಕ ಸಿಕ್ಕಿದೆ.
- ಉಗ್ರಂ ಮಂಜು
ಉಗ್ರಂ ಮಂಜು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಉಗ್ರಂ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರಿಗೆ ಸ್ವರ್ಗ ಸಿಕ್ಕಿದೆ.
- ರಂಜಿತ್ ಕುಮಾರ್
ರಂಜಿತ್ ಕುಮಾರ್ ಅವರು ನಟನಾಗಿ, ಕ್ರಿಕೆಟರ್ ಆಗಿ ಹೆಸರು ಮಾಡಿದ್ದಾರೆ. ಸಿಸಿಎಲ್ನಲ್ಲಿ ಸುದೀಪ್ ತಂಡದಲ್ಲೇ ಅವರು ಆಡಿದ್ದಾರೆ. ಅವರು ‘ಶನಿ’ ಧಾರಾವಾಹಿ ಮಾಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನರಕ ಸಿಕ್ಕಿದೆ.