ಎಸ್ಸಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಮ, ಕೊರಚರನ್ನು ಕೈಬಿಡುವಂತೆ ಮನವಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್
ಪರಿಶಿಷ್ಟ ಸಮುದಾಯದ ಪಟ್ಟಿಯಲ್ಲಿರುವ ಲಂಬಾಣಿ (ಬಂಜಾರ), ಬೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಎಸ್ಸಿ ಜಾತಿಗಳ ಪಟ್ಟಿಯಿಂದ ಕೈಬಿಡಲು ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ರಾಯಚೂರು ಜಿಲ್ಲೆಯವರಾದ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಮಿತ್ರಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಪ್ರತಿವಾದಿಗಳಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತೀಯ ಜನಗಣತಿ ಆಯುಕ್ತರು ಮತ್ತು ಪ್ರಧಾನ ರಿಜಿಸ್ಟ್ರಾರ್, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುಣಾವಾಣಾ ಆಯೋಗದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು.
ಸ್ಪೃಶ್ಯ ಜಾತಿಗಳಾಗಿರುವ ಹಾಗೂ ಪರಿಶಿಷ್ಟ ಜಾತಿಗಳಲ್ಲದ ಲಂಬಾಣಿ (ಬಂಜಾರ) ಕೊರಮ, ಕೊರಚ ಮತ್ತು ಬೋವಿ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಸಂವಿಧಾನದ 14, 16, 17, 46, 243(ಝಡ್), 330, 332, 341 ಮತ್ತು 366ನೇ ವಿಧಿಯ ಉಲ್ಲಂಘನೆಯಾಗಿದೆ. ಈ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಹೊರಡಿಸಲಾದ ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತ ಮನವಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸಲ್ಲಿಸಬೇಕು. ಆಯೋಗವು ಆ ಮನವಿಯನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು 2020ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.