ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ
ಬೆಂಗಳೂರು, ಜೂನ್ 16: ಚಿತ್ರದುರ್ಗದ ದರ್ಶನ್ (Darshan) ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ನಿನ್ನೆ ಕಸ್ಟಡಿ ಅಂತ್ಯವಾಗಿದ್ದ ಕಾರಣಕ್ಕೆ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಬಳಿಕ ದರ್ಶನ್ ಸೇರಿದಂತೆ 13 ಆರೋಪಿಗಳನ್ನ ಜೂನ್ 20 ರವರೆಗೆ ಅಂದ್ರೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೆಲ್ಲದರ ಮಧ್ಯೆ ಈ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಓರ್ವ ಪತ್ರಕರ್ತನಿಗೆ ದರ್ಶನ್ ಅಭಿಮಾನಿಗಳು ಹಲ್ಲೆ ಮಾಡಿರುವುದಾಗಿ ವರದಿ ಆಗಿದೆ.
ದರ್ಶನ್ ಈ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡಾಗಿನಿಂದ ಅವರು ಅಭಿಮಾನಿಗಳು ಅವರ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ನಾವು ನಿನ್ನ ಪರವಾಗಿದ್ದೇವೆ ಬಾಸ್ ಎಂದೆಲ್ಲಾ ಹೇಳುತ್ತಿದ್ದಾರೆ. ಅವರ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೇ ದರ್ಶನ್ ಅವರಂತೆಯೇ ಅವರ ಅಭಿಮಾನಿಗಳು ಕೂಡ ಒರಟು ಸ್ವಭಾವದವರು ಎನ್ನಲಾಗುತ್ತಿದೆ. ಆದರೆ ಇದೇ ಒರಟು ಸ್ವಭಾವದ ಕೆಲ ದರ್ಶನ್ ಅಭಿಮಾನಿಗಳು ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.