ರಸ್ತೆ ಗುಂಡಿ ದುರಸ್ತಿ: ಡಿಕೆಶಿ ನೀಡಿದ್ದ ಗಡುವು ಮುಕ್ತಾಯ, ಕೊನೆ ಕ್ಷಣದಲ್ಲಿ ಪಾಲಿಕೆ ಭಾರೀ ಕಸರತ್ತು..!
ಬೆಂಗಳೂರು (ನ್ಯೂಸ್ ಎನ್ ಕನ್ನಡ ): ನಗರದಲ್ಲಿನ ರಸ್ತೆ ಗುಂಡಿಗಳ ತುಂಬಿಸುವ ಗಡುವು ಸೆಪ್ಟೆಂಬರ್ 16ಕ್ಕೆ (ಸೋಮವಾರ ಮಧ್ಯರಾತ್ರಿ) ಮುಕ್ತಾಯವಾಗುತ್ತಿದ್ದು, ಸರ್ಕಾರದ ಸೂಚನೆಯಂತೆ ರಸ್ತೆ ಗುಂಡಿಗಳ ದುರಸ್ತಿ ಮಾಡಲು ಕೊನೆ ಕ್ಷಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ.
ರಸ್ತೆ ಗುಂಡಿ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಮುಂದಿನ 15 ದಿನಗಳಲ್ಲಿ ದುರಸ್ತಿ ಕಾರ್ಯ ನಡೆಸದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೆ.1ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಡಕ್ ಸೂಚನೆ ನೀಡಿದ್ದರು.
ಉಪ ಮುಖ್ಯಮಂತ್ರಿಗಳು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದರು. ಇದರಂತೆ ನೀಡಿದ್ದ ಗಡುವುದು ಇಂದಿಗೆ (ಸೆ.16) ಕೊನೆಗೊಳ್ಳಲಿದೆ.
15 ದಿನಗಳ ನಂತರ ಇದೀಗ ಡಿಕೆ.ಶಿವಕುಮಾರ್ ಅವರು ನಗರದಲ್ಲಿ ಮತ್ತೆ ಪರಿಶೀಲನೆ ನಡೆಸಲಿದ್ದು, ಗಡುವು ಪಾಲನೆ ಮಾಡದ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ ಗಡುವಿನ ಅಂತಿಮ ದಿನವಾದ ಭಾನುವಾರ ರಜೆ ದಿನವಾದರೂ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ತೊಡಗಿದ್ದರು.
ದಾಸರಹಳ್ಳಿ ವಲಯ ಅಧಿಕಾರಿಗಳು ಗಿರೀಶ್ ಅವರು ತಮ್ಮ ವಲಯದ ಕಾಮಗಾರಿಯ ಮೇಲೆ ನಿಗಾ ವಹಿಸಿ ಮಾತನಾಡಿ, ದಾಸರಹಳ್ಳಿ ವಲಯದ 46 ಕಿ.ಮೀ ಉದ್ದದ ಮುಖ್ಯ ಮತ್ತು ಆರ್ಟೀರಿಯಲ್ ರಸ್ತೆಗಳಲ್ಲಿ ಗುಂಡಿ ತುಂಬುವ ಕೆಲಸ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ನಮಗೆ 20 ಲೋಡ್ ಡಾಂಬರು ಬೇಕು. ರಸ್ತೆ ನಿರ್ಮಾಣ ಮಾಡುತ್ತಿರುವ ಸ್ಥಳಗಳಲ್ಲಿ ಡಾಂಬರು ತಂದು ದುರಸ್ತಿ ಕಾರ್ಯ ನಡೆಸುತ್ತಿದ್ದೇವೆಂದು ಹೇಳಿದ್ದಾರೆ.