ಯುವಕನ ಪ್ರೀತಿ ಕಿರುಕುಳಕ್ಕೆ ಕಾಲೇಜು ಅಪ್ರಾಪ್ತ ವಿದ್ಯಾರ್ಥಿನಿ ಆತ್ಮಹತ್ಯೆ
ಚಿತ್ರದುರ್ಗ(ನ್ಯೂಸ್ ಎನ್ ಕನ್ನಡ ) : ಸಹಪಾಠಿಯೊಬ್ಬನ ಕಿರುಕುಳದಿಂದ ನೊಂದ ವಿದ್ಯಾರ್ಥಿನಿ ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಹೊರ ವಲಯದ ಚಿತ್ರಾ ಡಾನ್ ಬಾಸ್ಕೋ ಪದವಿ ಕಾಲೇಜಿನಲ್ಲಿ ನಡೆದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಿಎಸ್ಇ ವಿದ್ಯಾರ್ಥಿನಿಯನ್ನು ಪಕ್ಕದಲ್ಲೇ ಇದ್ದ ಬಸವೇಶ್ವರ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಬಸವೇಶ್ವರ ಆಸ್ಪತ್ರೆಗೆ ಧಾವಿಸಿದ ವಿದ್ಯಾರ್ಥಿನಿಯ ತಂದೆ, ತಾಯಿಯ ರೋಧನ ಮುಗಿಲು ಮುಟ್ಟಿತ್ತು. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ, ಮಕ್ಕಳ ವಿಷಯದಲ್ಲಿ ಜಾಗ್ರತೆ ವಹಿಸಿಲ್ಲ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಆಡಳಿತ ಮಂಡಳಿಯ ಸದಸ್ಯರ ಜತೆ ವಾಗ್ವಾದ ನಡೆಯಿತು. ಡಿವೈಎಸ್ಪಿ ದಿನಕರ್, ಪಿಎಸ್‌ಐ ರಘು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ‘ವಿದ್ಯಾರ್ಥಿನಿ ಬೆಳಗ್ಗೆ 8.45ಕ್ಕೆ ಕಾಲೇಜಿಗೆ ಬಂದಿದ್ದು, ತರಗತಿಯಲ್ಲಿ ಕುಳಿತು ಸ್ನೇಹಿತೆಯರ ಜತೆ ಮಾತನಾಡಿದ್ದಾಳೆ.
ನಂತರ ಕಾಲೇಜಿನ ಮೂರನೇ ಮಹಡಿಗೆ ಹೋಗಿ ಜಿಗಿದಿದ್ದಾಳೆ. ಆಕೆಯ ಸಾವಿಗೆ ಸರಿಯಾದ ಕಾರಣ ಗೊತ್ತಿಲ್ಲ’ ಎಂದು ಕಾಲೇಜಿನ ಪ್ರಾಚಾರ್ಯ ಡೆನ್ನಿ ಹೇಳಿಕೆ ನೀಡಿದ್ದಾರೆ. ಫೈಜಾನ್ ಎಂಬ ಸಹಪಾಠಿ ವಿದ್ಯಾರ್ಥಿನಿ ಜತೆ ಸ್ನೇಹ ಹೊಂದಿದ್ದ ಎನ್ನುವ ಕಾರಣಕ್ಕೆ ಬಡಾವಣೆ ಠಾಣೆ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಮತ್ತೊಬ್ಬ ಯುವಕ ವಿದ್ಯಾರ್ಥಿನಿಗೆ ಪದೇ ಪದೇ ವಾಟ್ಸಪ್ ಸಂದೇಶ ಕಳುಹಿಸುತ್ತಿದ್ದ ಎನ್ನುವ ಅಂಶ ಬಯಲಾಗಿದೆ.
ಆದರೆ ಪೋಷಕರು ತರುಣ್ ಎಂಬ ಯುವಕನ ಕಿರುಕುಳ ಕಾರಣ ಎನ್ನುತ್ತಿದ್ದಾರೆ. ಶುಕ್ರವಾರ ಎಂದಿನಂತೆ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿನಿ ಸ್ನೇಹಿತರ ಜತೆ ಮಾತನಾಡಿ, ಇದ್ದಕ್ಕಿದ್ದ ಹಾಗೆ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ ಕಟ್ಟಡದಿಂದ ಜಿಗಿಯಲು ಸಜ್ಜಾಗಿರುವ ವೇಳೆ ಮತ್ತೋರ್ವ ವಿದ್ಯಾರ್ಥಿ ಕಾರಿಡಾರ್ ನಲ್ಲಿ ಹಾದು ಹೋಗಿದ್ದು, ಇದು ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿದ್ಯಾರ್ಥಿನಿ ಅ.17 ರ ಸಂಜೆಯೇ ಪೋಷಕರ ಬಳಿ ತರುಣ್ ಎಂಬ ಯುವಕ ತನಗೆ ಮೆಸೇಜ್ ಮಾಡಿ ‘ನೀನು ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ? ಹಾಗಿದ್ದರೆ ತಿಳಿಸು, ನಿನ್ನ ಬಳಿ ಮಾತನಾಡಬೇಕು’ ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಳು. ವಿದ್ಯಾರ್ಥಿನಿಯ ತಂದೆ ‘ನಾನೇ ಕಾಲೇಜು ಬಳಿ ಬಂದು ಮಾತನಾಡುತ್ತೇನೆ. ಪೊಲೀಸ್ ಕಂಪ್ಲೇಂಟ್ ಕೊಡೋಣ’ ಎಂದು ಧೈರ್ಯ ತುಂಬಿದ್ದರು.
ಮೆಸೇಜ್ಗಳನ್ನು ಮಾಡಿ, ಕಿರುಕುಳ ನೀಡಿದ್ದರಿಂದಲೇ ನೊಂದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ, ಲಾರಿ ಚಾಲಕ ಬಿ.ಸುಧಾಕರ್ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದರು. ಯುವತಿಗೆ ಇನ್ನೂ 18 ವರ್ಷ ಪೂರ್ತಿ ಆಗದ ಕಾರಣ ಮಹಿಳಾ ಠಾಣೆಗೆ ವರ್ಗಾಯಿಸಿ ದೂರು ದಾಖಲಿಸಲಾಗಿದೆ.