ಬೆಂಗಳೂರು(ನ್ಯೂಸ್ ಎನ್ ಕನ್ನಡ ):: ರಾಜ್ಯದಲ್ಲಿ ಗೃಹಲಕ್ಷ್ಮಿ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳ ಹಣವನ್ನು ನಿಧನರಾದವರ ಹೆಸರಲ್ಲಿ ವಿತರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬ ತಂತ್ರಾಂಶದ ಪರಿಶೀಲನೆಯಲ್ಲಿ ಈ ದುರುಪಯೋಗ ಪತ್ತೆಯಾಗಿದ್ದು, ಸುಮಾರು 2.50 ಲಕ್ಷ ಪ್ರಕರಣಗಳಲ್ಲಿ ಅನಧಿಕೃತ ಲಾಭ ಪಡೆದಿರುವ ಮಾಹಿತಿ ಲಭ್ಯವಾಗಿದೆ.ಇದರಿಂದಾಗಿ ಸುಮಾರು ₹70 ಕೋಟಿ ಹಣ ನಿಧನರಾದವರ ಖಾತೆಗಳಿಗೆ ಜಮಾ ಆಗಿರುವುದು ತಿಳಿದುಬಂದಿದೆ.ಬಡವರಿಗೆ ನೆರವು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಫಲಾನುಭವಿಗಳು ನಿಧನರಾದ ಬಳಿಕವೂ ಅವರ ಹೆಸರಲ್ಲಿ ಯೋಜನೆಗಳ ಹಣ ಪಡೆಯುತ್ತಿರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎತ್ತಿದೆ.2023ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್-ಜುಲೈನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆಗಸ್ಟ್‌ನಿಂದ ಗೃಹಲಕ್ಷ್ಮಿ ಯೋಜನೆಯಡಿ ಹಣ ವರ್ಗಾವಣೆ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಇ-ಕೆವೈಸಿ ಮಾಡಿಸಿದ್ದ ಫಲಾನುಭವಿಗಳ ಜೀವನ ಸ್ಥಿತಿಯನ್ನು ನಂತರ ಪರಿಶೀಲಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನಿಧನರಾದವರ ಮಾಹಿತಿಯನ್ನು ನವೀಕರಿಸದ ಹಿನ್ನೆಲೆ ದುರುಪಯೋಗ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎರಡು ವರ್ಷಕ್ಕೊಮ್ಮೆ ಜೀವಿತ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಇರಬೇಕೆಂದು ಸೂಚಿಸಿತ್ತು. ಆದರೆ ದೀರ್ಘ ಅವಧಿಯ ಕಾರಣ ದುರುಪಯೋಗ ಹೆಚ್ಚಾಗಿರುವ ಸಾಧ್ಯತೆ ವ್ಯಕ್ತವಾಗಿದೆ.ಇದನ್ನು ತಡೆಯಲು ತಂತ್ರಜ್ಞಾನ ಆಧಾರಿತ ಹೊಸ ಆಯಪ್ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸ್ಥಳೀಯ ಮಟ್ಟದಲ್ಲಿ ನಿಧನ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸುಮಾರು ಸಾವಿರ ಜನರಿಗೆ ಒಬ್ಬ ಅಂಗನವಾಡಿ ಕಾರ್ಯಕರ್ತೆ ಇದ್ದು, ಅವರ ವ್ಯಾಪ್ತಿಯಲ್ಲಿ ಯಾರಾದರೂ ನಿಧನರಾದರೆ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಮೂಲಕ ಅನರ್ಹ ಖಾತೆಗಳಿಗೆ ಹಣ ವರ್ಗಾವಣೆ ತಡೆಯುವ ಉದ್ದೇಶ ಹೊಂದಲಾಗಿದೆ.ದುರುಪಯೋಗ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುವುದಾಗಿ ಇಲಾಖೆ ತಿಳಿಸಿದೆ.










