ಕ್ರೈಂ

ಮಂಗಳೂರು :ಬೈಕ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣ: ಸವಾರನಿಗೆ ದಂಡ, ಬೈಕ್ ಮಾಲಕ ಜೈಲು ಪಾಲು.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಕೊಟ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯೋರ್ವರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಚಾಲನಾ ಪರವಾನಿಗೆ ಇಲ್ಲದ ಆರೋಪಿ ಬೈಕ್ ಸವಾರನಿಗೆ ದಂಡ ವಿಧಿಸಿದ್ದು ಬೈಕ್ ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ2022ರ ಫೆ.27ರಂದು ನೆಟ್ಟಣಿಗೆಯ ಕೊಟ್ಯಾಡಿ ಎಂಬಲ್ಲಿ ಮುಳಿಯೂರು ನಿವಾಸಿ ಶಾಹೀದ್(24ವ)ರವರು ಚಲಾಯಿಸುತ್ತಿದ್ದ ಕೇರಳ ರಾಜ್ಯದ ನೋಂದಾವಣೆಯ ಬೈಕ್ ಕೊಟ್ಯಾಡಿ ರಸ್ತೆ ಬದಿಯಲ್ಲಿ ನಿಂತಿದ್ದ ಕೊಟ್ಯಾಡಿ ನಿವಾಸಿ ದುಗ್ಗಮ್ಮ (55ವ) ಎಂಬವರಿಗೆ ಡಿಕ್ಕಿಯಾಗಿತ್ತು.ಡಿಕ್ಕಿಯ ರಭಸಕ್ಕೆ ದುಗ್ಗಮ್ಮ ಅವರು ಮೃತಪಟ್ಟಿದ್ದರು.ಬೈಕ್‌ನಲ್ಲಿದ್ದ ಸಹಸವಾರೆ ನೆಬಿಸಾ ಅವರು ಗಾಯಗೊಂಡಿದ್ದರು.ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ರವಿ.ಬಿ.ಎಸ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಬೈಕ್ ಸವಾರ ಶಾಹೀದ್ ಅವರಿಗೆ ಚಾಲನಾ ಪರವಾನಿಗೆ ಇಲ್ಲದಿರುವುದು ಬೆಳಕಿಗೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಬೈಕ್ ಮಾಲಕ ಮುಳಿಯೂರು ನಿವಾಸಿ ಮಹಮ್ಮದ್ ಶಾಕೀರ್ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು.ಬೈಕ್ ಸವಾರ ಶಾಹೀದ್ ವಿರುದ್ಧ ಸೆಕ್ಷನ್ 3(1)/ಆರ್‌ವೈಡಬ್ಲ್ಯಾರ್/ಡಿ 181 ಐಎಮ್‌ವಿ ಮೋಟಾರು ಕಾಯ್ದೆಯಂತೆ ಮತ್ತು ಬೈಕ್ ಮಾಲಕ ಮಹಮ್ಮದ್ ಶಾಕೀರ್ ಅವರ ವಿರುದ್ಧ ಸೆಕ್ಷನ್ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್.ಅವರು ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರ ಶಾಹೀದ್ ಅವರಿಗೆ ರೂ.5 ಸಾವಿರ ದಂಡ ವಿಧಿಸಿ,ಬೈಕ್ ಮಾಲಕ ಮಹಮ್ಮದ್ ಶಾಕೀರ್ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ರೂ.5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button