ಬೆಂಗಳೂರು(ನ್ಯೂಸ್ ಎನ್ ಕನ್ನಡ ): ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಭರ್ಜರಿ ಗೆಲುವಿನಿಂದಾಗಿ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಈ ಕಠಿಣತೆಯ ನಡುವೆ ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್ಗೇರಬಹುದು. ಅಂದರೆ ಟೀಮ್ ಇಂಡಿಯಾ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು.ಈ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಹೀಗೆ ಮಾಡಿದ್ರೆ ವೆಸ್ಟ್ ಇಂಡೀಸ್ ತನ್ನ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದರೂ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ಗೇರಬಹುದು.
ಪ್ರಸ್ತುತ ನೆಟ್ ರನ್ ರೇಟ್:ವೆಸ್ಟ್ ಇಂಡೀಸ್: +5.350ಸೌತ್ ಆಫ್ರಿಕಾ: +3.800ಭಾರತ: – 3.800ಝಿಂಬಾಬ್ವೆ: – 5.350ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಝಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಝಿಂಬಾಬ್ವೆ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಆದರೆ ಇದಾಗ್ಯೂ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಬೇಕು.ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಗೆದ್ದರೆ ಟೀಮ್ ಇಂಡಿಯಾ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಸೆಮಿಫೈನಲ್ಗೇರಲು ಅವಕಾಶ ಪಡೆಯಲಿದೆ. ಇದಕ್ಕಾಗಿ ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಗೆಲ್ಲಬೇಕು.
ಟೀಮ್ ಇಂಡಿಯಾಗೆ ಅಗತ್ಯವಿರುವ ಗೆಲುವಿನ ಅಂತರದ ಅಂದಾಜು ಲೆಕ್ಕಾಚಾರ ಈ ಕೆಳಗಿನಂತಿದೆ…ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 200 ರನ್ಗಳಿಸಿದರೆ, ಝಿಂಬಾಬ್ವೆ ತಂಡವನ್ನು ಕನಿಷ್ಠ 120 ರನ್ಗಳ ಒಳಗೆ ಆಲೌಟ್ ಮಾಡಬೇಕು. ಇದರಿಂದ ಮೈನಸ್ನಲ್ಲಿರುವ ನೆಟ್ ರನ್ ರೇಟ್ ಅನ್ನು ಟೀಮ್ ಇಂಡಿಯಾ ಪ್ಲಸ್ ಮಾಡಿಕೊಳ್ಳಬಹುದು.ಝಿಂಬಾಬ್ವೆ ತಂಡವು 150 ರನ್ಗಳಿಸಿದರೆ, ಭಾರತ ತಂಡವು 151 ರನ್ಗಳ ಗುರಿಯನ್ನು 10 ರಿಂದ 11 ಓವರ್ಗಳಲ್ಲಿ ಚೇಸ್ ಮಾಡಬೇಕು. ಇದರಿಂದಾಗಿ ಕೂಡ ಭಾರತದ ನೆಟ್ ರನ್ ರೇಟ್ ಗಮನಾರ್ಹವಾಗಿ ಸುಧಾರಿಸುತ್ತದೆ.
ವೆಸ್ಟ್ ಇಂಡೀಸ್ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು ಕೂಡ ಟೀಮ್ ಇಂಡಿಯಾ ಬೃಹತ್ ಅಂತರದ ಗೆಲುವು ಕಾಣಬೇಕು.ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 200 ರನ್ ಕಲೆಹಾಕಿದರೆ ಕನಿಷ್ಠ 80 ರನ್ಗಳ ಅಂತರದ ಗೆಲುವು ದಾಖಲಿಸಬೇಕು.ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ 150 ರನ್ಗಳಿಸಿದರೆ 12 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ.ಅಂದರೆ ಇಲ್ಲಿ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡವನ್ನು 150 ರನ್ಗಳಿಗೆ ನಿಯಂತ್ರಿಸಿ ಟೀಮ್ ಇಂಡಿಯಾ 11 ಓವರ್ಗಳಲ್ಲಿ ಚೇಸ್ ಮಾಡಿ ಗೆದ್ದರೆ ಮಾತ್ರ ನೆಟ್ ರನ್ ರೇಟ್ನಲ್ಲಿ ಗಮನಾರ್ಹಗ ಸುಧಾರಣೆ ಕಂಡು ಬರಲಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಬೇಕಾಗುತ್ತದೆ.ವಿಶೇಷ ಸೂಚನೆ: ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯದ ಬಳಿಕವಷ್ಟೇ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಅಥವಾ ಸೋತರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಬದಲಾವಣೆ ಕಂಡು ಬರಲಿದೆ. ಹೀಗಾಗಿ ವೆಸ್ಟ್ ಇಂಡೀಸ್-ಸೌತ್ ಆಫ್ರಿಕಾ ನಡುವಣ ಪಂದ್ಯದ ಬಳಿಕವಷ್ಟೇ ಟೀಮ್ ಇಂಡಿಯಾಗೆ ಕೊನೆಯ ಮ್ಯಾಚ್ನಲ್ಲಿ ಎಷ್ಟು ರನ್ಗಳ ಅಂತರದ ಗೆಲುವು ಅಗತ್ಯವಿದೆ ಎಂಬುದು ನಿರ್ಧಾರವಾಗಲಿದೆ.








