ಕುಡಿಸಿ ವಿದ್ಯಾರ್ಥಿನಿಯರಿಂದ ನೃತ್ಯ ಮಾಡಿಸಿ,ಅಸಭ್ಯ ವರ್ತನೆ, – ಕನಕಪುರ ರೂರಲ್ ಕಾಲೇಜಿನ ಉಪನ್ಯಾಸಕರಿಂದ ಮಡಿಕೇರಿ ಪ್ರವಾಸದ ಹೆಸರಲ್ಲಿ ಕಾಲೇಜಿನ ಮರ್ಯಾದೆ ಹರಾಜು
ರಾಮನಗರ (ನ್ಯೂಸ್ ಎನ್ ಕನ್ನಡ ): ಕಾಯಕಯೋಗಿ ಎಸ್. ಕರಿಯಪ್ಪನವರು
ಕಟ್ಟಿ ಬೆಳೆಸಿ, ಅಕ್ಷರ ಜ್ಞಾನವನ್ನು ನೀಡುತ್ತಿದ್ದ ರೂರಲ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮದ್ಯಪಾನ ಮಾಡಿಸಿ ವಿದ್ಯಾರ್ಥಿಗಳ ಜತೆ ಅಸಭ್ಯವಾಗಿ ವರ್ತಿಸಿದ ಸಂಬಂಧ ಮಕ್ಕಳ ರಕ್ಷಣಾ ಘಟಕದಲ್ಲಿ ದೂರು ದಾಖಲಾಗಿದೆ.
ಕನಕಪುರ ನಗರದ ರೂರಲ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆಂದು ಮಡಿಕೇರಿ ಗೆ ಕರೆದುಕೊಂಡು ಹೋಗಿದ್ದಾಗ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ಮಧ್ಯೆ ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಿಸಿ ಅಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮದ್ಯಪಾನ ಮಾಡಿಸಿ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂದ ನೊಂದ ವಿದ್ಯಾರ್ಥಿಗಳು ರಾಜ್ಯ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ.
ಕನಕಪುರ ನಗರದ ರೂರಲ್ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮದ್ಯಪಾನ ಮಾಡಿಸಿ ನೃತ್ಯ ಮಾಡಿಸುತ್ತಿರುವ ವಿಡಿಯೊ ಚಿತ್ರೀಕರಣ ಮತ್ತು ಫೋಟೊಗಳನ್ನು
ನೀಡಿದ್ದು, ಜೊತೆಗೆ ಉಪನ್ಯಾಸಕರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಉಪನ್ಯಾಸಕರಾದ ಲಕ್ಷ್ಮೀಶ್, ನಾಗೇಶ್, ವಿಶ್ವನಾಥ್ ರವರ ವಿರುದ್ಧ ದೂರು ನೀಡಿದ್ದು, ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ 3 ಮಂದಿ ವಿದ್ಯಾರ್ಥಿನಿಯರಿಗೆ ಮದ್ಯಪಾನ ಮಾಡಿಸಿ ನಂತರ ನೃತ್ಯ ಮಾಡಿಸಿ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದು, ಲಕ್ಷ್ಮೀಶ್ ಎಂಬ ಉಪನ್ಯಾಸಕ ಒಬ್ಬರು ವಿದ್ಯಾರ್ಥಿನಿಯನ್ನು ಯಾರೂ ಇಲ್ಲದ ಬಸ್‌ನೊಳಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಒಂದು ಗಂಟೆ ಕಾಲ ವರ್ತಿಸಿದ್ದು, ಈ ಬಗ್ಗೆ ತನಿಖೆ ನಡೆಸಿ,ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕಾಲೇಜಿನ ಅಟೆಂಡರ್ ಯಾರು ಇಲ್ಲದ ಬಸ್‌ನಲ್ಲಿ ಉಪನ್ಯಾಸಕ ಗಂಟೆಗಟ್ಟಲೇ ಏನು ಮಾಡುತ್ತಿದ್ದಾರೆ ಎಂದು ನೋಡಲು ಹೋದಾಗ ಆತನಿಗೆ ಬೈದು ಕಳುಹಿಸಿದ್ದು, ನಂತರ ವಿದ್ಯಾರ್ಥಿಗಳು
ಮೂವರು ಮಹಿಳಾ ಉಪನ್ಯಾಸಕಿಯರಿಗೆ ಈ ಬಗ್ಗೆ ತಿಳಿಸಿದಾಗ ”ಇದೆಲ್ಲಾ ಕಾಮನ್’ ಎನ್ನುವಂತೆ ತಿಳಿಸಿದ್ದಾರೆ ಎಂದು ನೊಂದ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಸದ್ಯ ಮಕ್ಕಳ ರಕ್ಷಣಾ ಘಟಕ ರಾಮನಗರ
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಗೆ ವರದಿ ಕೇಳಿ ನೋಟಿಸ್ ಜಾರಿಗೊಳಿಸಿದೆ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.