ಏಪ್ರಿಲ್ 17 ರವರೆಗೆ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ- ಹವಾಮಾನ ಇಲಾಖೆಯಿಂದ ಮಾಹಿತಿ
ಬೆಂಗಳೂರು : ರಾಜ್ಯದಲ್ಲಿ ಕಳೆದ ವರ್ಷ ಮಳೆಯಾಗದ ಹಿನ್ನೆಲೆ ಕೆರೆ, ಕಟ್ಟೆ, ಡ್ಯಾಂ ಸೇರಿದಂತೆ ನೀರಿನ ಮೂಲಗಳಾದ ನದಿಗಳು ಬತ್ತಿವೆ. ಈ ವರ್ಷ ಯುಗಾದಿಯ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ರಾಜ್ಯದ ಜನತೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ.
ಹೌದು, ಯುಗಾದಿ ಹಬ್ಬದ ಶುಭ ದಿನವೇ ಕರ್ನಾಟಕದ ವಿವಿಧ ಭಾಗದಲ್ಲಿ ಭಾರಿ ಮಳೆ ಬಿದ್ದಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಎಲ್ಲರೂ ಮಳೆಗಾಗಿ ಪ್ರಾರ್ಥಿಸುತ್ತಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ ಬಂದಿದ್ದು, ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದು, ವರ್ಷದ ಮೊದಲ ಮಳೆ ಆಗಮನದಿಂದ ಜನ ಸಂತಸಗೊಂಡಿದ್ದಾರೆ
ಇಂದಿನಿಂದ ಏಪ್ರಿಲ್ 17ರವರೆಗೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಒಣಹವೆ ಮುಂದುವರೆಯಲಿದ್ದು, ಏಪ್ರಿಲ್ 15ರಿಂದ ಎರಡು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಏಪ್ರಿಲ್ 12 ರಂದು ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯನಗರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು, ಗದಗ, ಕೊಪ್ಪಳ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ದಾವಣಗೆರೆ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿದು ಬಂದಿದೆ.