ಮಹಿಳಾ ವಾಶ್ ರೂಮ್ ನಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟಿದ್ದ ಸಿಬ್ಬಂದಿ ಬಂಧನ
ಬೆಂಗಳೂರು : ಬೆಂಗಳೂರಿನ ಕಾಫಿ ಶಾಪ್‌ಗೆ ತೆರಳಿದ್ದ ಯುವತಿಯೊಬ್ಬಳು ಅಲ್ಲಿನ ವಾಶರೂಮ್ ನಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟಿದ್ದ ಹಿಡನ್ ಕ್ಯಾಮೆರಾ ಪತ್ತೆ ಮಾಡಿದ್ದಾರೆ. ಮಹಿಳೆಯರು ಇಂತಹ ಶಾಪ್‌ಗಳಲ್ಲಿ ವಾಶ್‌ರೂಮ್ ಬಳಸುವ ಮುನ್ನ ಇರಲಿ ಎಚ್ಚರ ಎಂದು ಆ ಯುವತಿ ಮನವಿ ಮಾಡಿದ್ದಾರೆ.
ಸದ್ಯ ಸದಾಶಿವನಗರದ ಪೊಲೀಸರು ಕ್ಯಾಮೆರಾ ಇಟ್ಟವನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಯುವತಿಯೊಬ್ಬಳು ನಗರದ ಬಿಇಎಲ್ ರಸ್ತೆಯ ‘ಥರ್ಡ್ ವೇವ್ ಕಾಫೀ’ ಔಟ್‌ಲೆಟ್‌ಗೆ ತೆರಳಿದಿದ್ದಾರೆ. ಕಾಫಿ ಆರ್ಡರ್ ಮಾಡಿರುವ ಯುವತಿ ಅಲ್ಲಿನ ವಾಶ್‌ರೂಮ್ ಬಳಸಲು ತೆರಳಿದಾಗ ಅಲ್ಲಿ ಯಾರಿಗೂ ಕಾಣದಂದೆ ಶಾಪ್ ಸಿಬ್ಬಂದಿಯೇ ಇಟ್ಟಿದ್ದ ಮೊಬೈಲ್ ಕ್ಯಾಮೆರಾ ಇಟ್ಟಿದ್ದನ್ನು ಪತ್ತೆ ಮಾಡಿ ಪೊಲಿಸರಿಗೆ ತಿಳಿಸಿದ್ದಾಳೆ.
ಕ್ಯಾಮೆರಾ ಇಟ್ಟಿದ್ದ ಕಾಫೀ ಶಾಪ್ ಸಿಬ್ಬಂದಿ 23 ವರ್ಷದ ಮನೋಜ್ ಎನ್ನಲಾಗಿದೆ. ಆರು ತಿಂಗಳ ಹಿಂದೆ ಈ ಶಾಪ್‌ನಲ್ಲಿ ಕೆಲಸಕ್ಕೆ ಸೇರಿದ್ದ ಈತ ಗುಟ್ಟಹಳ್ಳಿಯಲ್ಲಿ ವಾಸಿಸುತ್ತಿದ್ದು, ಶಿವಮೊಗ್ಗ ಮೂಲದವನು ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಫ್ಲೈಟ್ ಮೂಡ್‌ನಲ್ಲಿತ್ತು ಕ್ಯಾಮೆರಾ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಶ್‌ರೂಮ್‌ಗೆ ತೆರಳಿದಾಗ ಅಲ್ಲಿ ಡಸ್ಟ್‌ಬೀನ್ ಹಿಂದೆ ಯಾರಿಗೂ ಕಾಣದಂತೆ ಕ್ಯಾಮೆರಾ ಇಡಲಾಗಿದೆ. ನೋಡಿದರೆ ಕಳೆದ ಎರಡು ಗಂಟೆಗಳಿಂದ ಅದು ರೆಕಾರ್ಡ್ ಮಾಡುತ್ತಿದ್ದು, ಟಾಯ್ಲೆಟ್ ಸೀಟಿಗೆ ಮುಖ ಮಾಡಿ ಇಡಲಾಗಿತ್ತು. ಫ್ಲೈಟ್ ಮೂಡ್‌ಗೆ ಹಾಕಿ ರೆಕಾರ್ಡ್ ಇಟ್ಟಿರುವುದನ್ನು ಯುವತಿ ಪತ್ತೆ ಮಾಡಿದ್ದಾರೆ.
ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಫೋನ್ ವಶಕ್ಕೆ ಪಡೆದಿದ್ದಾರೆ. ಪರಿಶೀಲಿಸಿದಾಗ ಇದು ಇಲ್ಲಿನ ಸಿಬ್ಬಂದಿ ಬಂಧಿತ ಮನೋಜ್ ನದ್ದು ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕ್ರಮ ಜರುಗಿಸಿದ್ದಾರೆ.
ನೀವು ಅಗತ್ಯ ಜಾಗೃತೆ ವಹಿಸಿ
ಇದೊಂದು ಭಯಾನಕ ಘಟನೆಯಾಗಿದ್ದು, ನೆನಸಿಕೊಂಡರೆ ಅಸಹ್ಯವೆನಿಸುತ್ತದೆ. ಕೆಫೆ ಅಥವಾ ರೆಸ್ಟೋರೆಂಟ್ ಎಷ್ಟೇ ಪ್ರಸಿದ್ಧವಾದರೂ ಸಹಿತ ಅಲ್ಲಿ ವಾಶ್‌ರೂಮ್ ಬಳಸುವಾಗ ಇನ್ನು ಮುಂದೆ ಹೆಚ್ಚು ಜಾಗೃತ ವಹಿಸುತ್ತೇನೆ. ನೀವು (ಮಹಿಳೆಯರು) ಸಹ ಇಂತಹ ಶಾಪ್‌ಗಳಲ್ಲಿ ವಾಶ್‌ರೂಮ್ ಹೋಗಬೇಕಾದರೆ ಅಗತ್ಯ ಎಚ್ಚರ ವಹಿಸಿ ಎಂದು ಆ ಯುವತಿ ಮನವಿ ಮಾಡಿದ್ದಾರೆ.
ಸದ್ಯ ಮನೋಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 77 (ವೋಯರಿಸಂ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.