ಕ್ರೈಂ

ಮಂಗಳೂರು :ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ 20ವರ್ಷ ಶಿಕ್ಷೆ.

ಮಂಗಳೂರು : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು, ಆಕೆ ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿದ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ 50 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್ ಸಿ ಎಸ್ ಟಿ – ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ನಿವಾಸಿ ಸುಧೀರ್ ಶಿಕ್ಷೆಗೊಳಗಾದ ಅಪರಾಧಿ.2021ರ ಡಿಸೆಂಬರ್‌ನಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ತನ್ನ ಮನೆಯ ಹತ್ತಿರದ ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದಳು. ಈ ವೇಳೆ ಆರೋಪಿ, ಅಂಗಡಿಗೆ ಹೋಗೋಣ ಎಂದು ಯಾರೂ ವಾಸವಿಲ್ಲದ ಅಜ್ಜಿ ಮನೆಗೆ ಆಕೆಯನ್ನು ಕರೆದೊಯ್ದಿದ್ದ. ಅಲ್ಲಿ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಹೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು.

ಬಳಿಕ ಪದೇ ಪದೇ ತನ್ನ ಮನೆ ಹಾಗೂ ಅಜ್ಜಿ ಮನೆಯಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಪರಿಣಾಮ 2022ರ ಆಗಸ್ಟ್ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು. ಆರೋಪಿ ತನ್ನ ತಾಯಿಗೆ ಈ ವಿಷಯ ತಿಳಿಸಿ, ಗರ್ಭಪಾತ ಮಾಡಿಸಲು ಪ್ಲಾನ್ ಮಾಡಿದ್ದ ಆಸ್ಪತ್ರೆಯವರನ್ನು ಪತಿ- ಪತ್ನಿಯೆಂದು ನಂಬಿಸಲು ಬಾಲಕಿಗೆ ಕಾಲುಂಗರ, ಕರಿಮಣಿ ಸರ ಹಾಕಿ ಫೋಟೋ ತೆಗೆಸಿದ್ದರು. ಬಾಲಕಿಯ ತಾಯಿಗೆ ಮದುವೆಗೆ ಕರೆದೊಯ್ಯುವುದಾಗಿ ತಿಳಿಸಿ, ಸಂತ್ರಸ್ತೆಯನ್ನು 2022ರ ಡಿಸೆಂಬರ್ 17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಗರ್ಭಪಾತ ಮಾಡಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿತು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು. ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಸತ್ಯನಾರಾಯಣ ಮತ್ತು ತಂಡ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಅತ್ಯಾಚಾರ ಅಪರಾಧಕ್ಕೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 40,000 ರೂ. ದಂಡ, ಸಾಕ್ಷ್ಯನಾಶ ಮಾಡಿದ ಅಪರಾಧಕ್ಕೆ 3 ವರ್ಷಗಳ ಸಾದಾ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ದಂಡದ ಹಣ 50,000 ರೂ. ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬಾಲಕಿಗೆ ಹೆಚ್ಚುವರಿಯಾಗಿ 2,00,000 ರೂ. ಹಣದ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನ್ಯಾಯಾಧೀಶ ಮಾನು ಕೆ.ಎಸ್ ನಿರ್ದೇಶಿಸಿದ್ದಾರೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button