ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು – ಎಲ್ಲೆಡೆ ಹೈ ಅಲರ್ಟ್
ಬೆಂಗಳೂರು: ನಗರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ಕರಿನೆರಳಿನ ಮುನ್ಸೂಚನೆ ತಿಳಿದು ಬಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ ಪೊಲೀಸರು ಹೈ ಎಲರ್ಟ್ ಆಗಿದ್ದು, ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದಿನಾಂಕ 15-08-2024ರಂ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ಮತ್ತು ಸಮಾರಂಭಗಳು ನಡೆಯಲಿದೆ ಎಂದಿದ್ದಾರೆ.
ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಟ್ಟುಕೊಂಡಿರುವ ಹಿನ್ನಲೆಯಲ್ಲಿ ತಾವು ಸಂಘದಲ್ಲಿ ಸದಸ್ಯರಾಗಿರುವ ಹೋಟೆಲ್ ಗಳ ಮಾಲೀಕರಿಗೆ, ಹೋಟೆಲ್ ಗಳ ಮ್ಯಾನೇಜರ್ ಹಾಗೂ ಇತರೆ ನೌಕರರಿಗೆ ಹೋಟೆಲ್ ಗಳಲ್ಲಿ ತಂಗುವ ವಿದೇಶಿಯರು ಮತ್ತು ಸಂಶಯಾಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳು ಹೋಟೆಲ್ ಗಳಲ್ಲಿ ತಂಗಿದಲ್ಲಿ ಅವರ ಬಗ್ಗೆ ನಿಗಾವಹಿಸಿ, ವಿಶೇಷವೇನಾದರೂ ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಈ ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕೆಂದು ಕೋರಿದ್ದಾರೆ. ಅದೇ ರೀತಿಯಾಗಿ ನಿಮ್ಮ ವಸತಿ ಗೃಹಗಳಲ್ಲಿ ತಂಗುವವರ ವಿವರಗಳನ್ನು ಪೋಟೋ ಐಡಿ ಸಮೇತ ನಿರ್ವಹಿಸಲು ಸೂಚಿಸಿದ್ದಾರೆ.