ಪಿ ಎಸ್ ಐ ಪರಶುರಾಮ್ ಅನುಮಾನಾಸ್ಪದ ಸಾವು ಸಿ ಐ ಡಿ ತನಿಖೆ ಗೆ
ಬೆಂಗಳೂರು : ಯಾದಗಿರಿಯ ಸೈಬರ್ ಠಾಣೆಯಲ್ಲಿ ಪಿಎಸ್ಐ ಆಗಿದ್ದಂತ ಪರಶುರಾಮ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಪ್ರಾಮಾಣಿಕ ದಲಿತ ಅಧಿಕಾರಿ ಚಂದ್ರಶೇಖರನ್ ಅವರನ್ನು ಬಲಿ ಪಡೆದ ಕಾಂಗ್ರೆಸ್ ಸರ್ಕಾರ, ಈಗ ವರ್ಗಾವಣೆಗಾಗಿ ಲಂಚದ ಬೇಡಿಕೆ ಇಟ್ಟು ಮತ್ತೊಬ್ಬ ದಲಿತ ಅಧಿಕಾರಿ ಯಾದಗಿರಿಯ ಪಿಎಸ್ಐ ಪರಶುರಾಮ್ ಅವರನ್ನ ಬಲಿ ಪಡೆದುಕೊಂಡಿದೆ ಅಂತ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದರು.
ಸಿಎಂ ಸಿದ್ಧರಾಮಯ್ಯನವರೇ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ, ಮುಖ್ಯಮಂತ್ರಿಗಳು, ಸಚಿವರು ಭ್ರಷ್ಟಾಚಾರಕ್ಕೆ ಇಳಿದಿರುವಾಗ ಇನ್ನು ಶಾಸಕರು ಸುಮ್ಮನಿರುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಒತ್ತಡ, ಮಾನಸಿಕ ಕಿರುಕುಳದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಯಾದಗಿರಿ ಪಿಎಸ್ ಐ ಪರಶುರಾಮ್ ಅವರ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಸನ್ನಿಗೌಡ ಕಾರಣ ಎಂದು ಅವರ ಪತ್ನಿ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿ ಲಿಖಿತ ದೂರು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ.
ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲದಂತಾಗಿದ್ದು, ಈ ಕೂಡಲೇ ಶಾಸಕ ಚೆನ್ನಾರೆಡ್ಡಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಮತ್ತು ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದರು.
ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಯಾದಗಿರಿಯ ಸೈಬರ್ ಠಾಣೆಯಲ್ಲಿ ಪಿಎಸ್ಐ ಆಗಿದ್ದಂತ ಪರಶುರಾಮ್ ರವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ.