ಸುದ್ದಿ

ವಿಧಾನ ಪರಿಷತ್ ಚುನಾವಣೆ: ಯತೀಂದ್ರ ಸಿದ್ದರಾಮಯ್ಯ, ಐವನ್ ಡಿಸೋಜಾ ಸೇರಿದಂತೆ 8 ಮಂದಿಯ ಹೆಸರನ್ನು ಫೈನಲ್ ಮಾಡಿದ ಕಾಂಗ್ರೆಸ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ 8 ಮಂದಿಯ ಹೆಸರನ್ನು ಕಾಂಗ್ರೆಸ್ ಫೈನಲ್ ಮಾಡಿದೆ. ಈ ಮೂಲಕ ನಾಮಪತ್ರ ಸಲ್ಲಿಸಲು ಕೊನೆ ದಿನಕ್ಕೆ ಒಂದು ದಿನ ಬಾಕಿ ಮೊದಲು ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಂತಾಗಿದೆ.

ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜು, ಸಚಿವ ಎನ್.ಎಸ್. ಬೋಸರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನುಗೆ ಟಿಕೆಟ್ ಘೋಷಿಸಲಾಗಿದೆ. ಅಲ್ಲದೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.

ಯತೀಂದ್ರ ಸಿದ್ದರಾಮಯ್ಯ ತಾವು ಪ್ರತಿನಿಧಿಸುತ್ತಿದ್ದ ಮೈಸೂರಿನ ವರುಣಾ ಕ್ಷೇತ್ರವನ್ನು ತಂದೆ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟಿದ್ದರು. ಹೈಕಮಾಂಡ್ ಅವರಿಗೆ ಸೂಕ್ತ ಸ್ಥಾನಮಾನ ನೀಡೋ ಭರವಸೆ ನೀಡಿತ್ತು. ಇದೀಗ ಯತೀಂದ್ರಗೆ ವಿಧಾನ ಪರಿಷತ್ ಟಿಕೆಟ್ ಘೋಷಿಸಲಾಗಿದೆ.

ಮೂಲಗಳ ಪ್ರಕಾರ ಸಮುದಾಯಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಒಕ್ಕಲಿಗ ಸಮುದಾಯದಿಂದ ಈಗಿರುವ ಗೋವಿಂದರಾಜ್ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸಿದೆ. ಒಬಿಸಿ ಸಮುದಾಯದಿಂದ ಯತೀಂದ್ರ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ ಸಮುದಾಯದಿಂದ ವಸಂತಕುಮಾರ್, ರೆಡ್ಡಿ ಸಮುದಾಯದಿಂದ ಹಾಲಿ ಸಚಿವ ಎನ್​ಎಸ್ ಬೋಸರಾಜು, ಜಗದೇವ್ ಗುತ್ತೇದಾರ್ ಅವರಿಗೆ ಮಣೆ ಹಾಕಿದೆ.

ಇನ್ನು ಈ ಏಳು ಪರಿಷತ್​ ಸ್ಥಾನಗಳಿಗೆ ಮಾತ್ರವಲ್ಲದೇ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್​ ಸ್ಥಾನಕ್ಕೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದ್ರೆ, ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂಚಿತವಾಗಿಯೇ ಕಾಂಗ್ರೆಸ್ ಹೈಕಮಾಂಡ್ ಮಾಜಿ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದೆ.

Naveen Kumar

Managing Editor

Related Articles

Leave a Reply

Your email address will not be published. Required fields are marked *

Check Also
Close
Back to top button